ಪ್ರಕಲ್ಪ ಯೋಜನೆ, ಅನುಷ್ಠಾನ ಮತ್ತು ಪ್ರಸ್ತುತಿ - ಒಂದು ಟಿಪ್ಪಣಿ

From Karnataka Open Educational Resources
Jump to navigation Jump to search

ಪ್ರಕಲ್ಪದ ಅರ್ಥ

ವ್ಯವಸ್ಥೆ, ಸಮಸ್ಯೆ ಅಥವ ಪ್ರಕ್ರಿಯೆಗಳನ್ನು ಗುಣಮಟ್ಟ, ಸುಧಾರಣಾ ಸಾಧನ ಸಲಕರಣೆಗಳು ಹಾಗೂ ತಂತ್ರಗಳ ಮೂಲಕ ವ್ಯವಸ್ಥಿತವಾಗಿ ವಸ್ತುನಿಷ್ಟವಾಗಿ ಅಧ್ಯಯನ ಮಾಡಿ, ಸುಧಾರಣೆ ಕೈಗೊಳ್ಳುವ ವಿಧಾನವೇ`ಪ್ರಕಲ್ಪ’.

ಇದನ್ನು 'ಕಾರ್ಯ ಯೋಜನೆ' ಎಂದು ಸಹ ಕರೆಯುವರು.

ಪ್ರಕಲ್ಪದ ಹಂತಗಳು

ಪ್ರಕಲ್ಪವು ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಅಧ್ಯಯನದಲ್ಲಿ ಹಾಗೂ ಪರಿಹಾರ ಕಂಡುಕೊಳ್ಳುವಲ್ಲಿ ಮಹತ್ವದ ಪಾತ್ರವನ್ನು ವಹಿಸುವುದು. ಪ್ರಕಲ್ಪ ಈ ಕೆಳಗಿನ ಹಂತಗಳನ್ನು ಒಳಗೊಂಡಿದೆ.

೧. ಪ್ರಸ್ತಾವನೆ

ಪ್ರಸ್ತಾವನೆಯು ಪ್ರಕಲ್ಪದ ಆರಂಭದ ಹಂತ. ಪ್ರಕಲ್ಪದ ಕಾರ್ಯವನ್ನು ಕೈಗೊಳ್ಳುವ ಮೊದಲು ಸಲ್ಲಿಸುವ ಪ್ರಸ್ತಾವನೆಯು ಮುಖ್ಯವಾಗಿ ಶೀರ್ಷಿಕೆ, ಉದ್ದೇಶ ಮತ್ತು ಪ್ರಕಲ್ಪ ಕೈಗೊಳ್ಳುವ ರೀತಿ ಬೇಕಾಗುವ ಅವಧಿ, ಸ್ಥಳ, ತಗಲುವ ವೆಚ್ಚಗಳ ವಿವರಗಳನ್ನು ಒಳಗೊಂಡಿರುತ್ತದೆ. ಪ್ರಸ್ತಾವನೆ ಸಲ್ಲಿಸಿ ಸಂಬಂಧಿಸಿದವರಿಂದ ಅನುಮೋದನೆ ಪಡೆಯಬೇಕಾಗುತ್ತದೆ.

ಶೀರ್ಷಿಕೆ

ಶೀರ್ಷಿಕೆಯು ಪ್ರಕಲ್ಪದ ವಿಷಯವನ್ನು ಪ್ರತಿನಿಧಿಸುವ ಹಾಗಿರಬೇಕು. ಚಿಕ್ಕದಾಗಿ, ಅರ್ಥ ಪೂರ್ಣವಾಗಿರಬೇಕು.

ಉದ್ದೇಶಗಳು

ಪ್ರಕಲ್ಪದ ಉದ್ದೇಶಗಳು ಕೈಗೊಳ್ಳಲಿರುವ ಅಧ್ಯಯನಕದ ಅಂಶಗಳನ್ನು ಪ್ರತಿನಿಧಿಸುವ ಮತ್ತು ಸಾಧನೆಗೆ ಸಾಧ್ಯವಾಗುವಂತೆ ಇರಬೇಕು.

ಕಾರ್ಯ ವಿಧಾನ

ಕಾರ್ಯ ವಿಧಾನವು ಅಧ್ಯಯನ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ವ್ಯವಸ್ಥಿತವಾಗಿ ಕೈಗೊಂಡ ಕಾರ್ಯ. ಇದರಲ್ಲಿ ಗುಣ ಮಟ್ಟದ ಸಲಕರಣೆಗಳನ್ನು ಬಳಸಿ ಸಂಚಯನದ ಮೂಲಕ ಪ್ರಕಲ್ಪ ಸಂಗ್ರಹಿಸಿ ಅವುಗಳನ್ನು ವಿಶ್ಲೇಷಿಸುವುದಾಗಿದೆ.

೨. ಕಾರ್ಯಯೋಜನೆ

ಕಾರ್ಯ ಯೋಜನೆಯು ಅಧ್ಯಯನಕಾರರು, ಅಧ್ಯಯನಕ್ಕಾಗಿ ಬಳಸಿಕೊಳ್ಳುವ ಸಂಪನ್ಮೂಲಗಳು, ಅವಧಿ, ಕೆಲಸದ ವಿವರಗಳನ್ನು ಒಳಗೊಂಡಿರುತ್ತದೆ. ಅಧ್ಯಯನಕಾರರು ತಾವು ಕೆಲಸ ಮಾಡುವ ಅವಧಿ ಎಲ್ಲಿಂದ ಪ್ರಾರಂಭವಾಗಿ ಎಲ್ಲಿಗೆ ಮುಗಿಯುತ್ತದೆ ಎನ್ನುವುದನ್ನು ಕಾರ್ಯಯೋಜನೆಯಲ್ಲಿ ಸೂಚಿಸಬೇಕು. ಜೊತೆಗೆ ಮಾನವ ಸಂಪನ್ಮೂಲ ಹಾಗೂ ಇತರೆ ಸಂಪನ್ಮೂಲಗಳನ್ನು ಕಾರ್ಯ ಯೋಜನೆಯಲ್ಲಿ ಬಳಕೆ ಮಾಡುವ ರೀತಿಯನ್ನು ಮತ್ತು ಪ್ರಗತಿ ಪರಿಶೀಲನೆಯನ್ನು ಇದು ಒಳಗೊಂಡಿರುತ್ತದೆ. ಕೈಗೊಳ್ಳಲಿರುವ ಪ್ರಕಲ್ಪದ ವೇಳಾ ಪಟ್ಟಿಯನ್ನು ಮತ್ತು ಅವಶ್ಯವಿರುವ ಅಂದಾಜು ಆಯವ್ಯಯವನ್ನು ಮಾಡಿಕೊಂಡಿರಬೇಕು.

ಸಂಚಯನ

ನಮ್ಮ ಪ್ರಕಲ್ಪ ಅವ್ಯಯನಕ್ಕೆ ಯಾರಿಂದ ಯೋಜನೆಗಳು, ಆಲೋಚನೆಗಳು ದೊರೆಯುವುದೋ ಆ ಗುಂಪಿಗೆ ಸಂಚಯನ ಎನ್ನುವರು. ಇದು ಒಟ್ಟು ಜನ ಸಂಖ್ಯೆಯ ಪ್ರತಿನಿಧಿಕ ಗುಂಪಾಗಿರುತ್ತದೆ. ಇದೊಂದು ಅಂಶಗಳ ಪಟ್ಟಿಯಾಗಿರುತ್ತದೆ.

ಉದಾ; ಕಂಪ್ಯೂಟರ್‌ ಲ್ಯಾಬ್ ಅನುಷ್ಟಾನಕ್ಕಾಗಿ - ವಿದ್ಯುತ್ - ಕಂಪ್ಯೂಟರ್‌, ಕಂಪ್ಯೂಟರ್ ಸುಗಮಗಾರರು ಇತ್ಯಾದಿ

೩. ಪ್ರಕಲ್ಪ ಯೋಜನೆಯ ಅಂಶಗಳು

ಅಂಶಗಳ ಪಟ್ಟಿಯನ್ನು ಸೂಕ್ತ ಸಲಕರಣೆಗಳ ಮೂಲಕ ವಿವಿಧ ಮೂಲಗಳಿಂದ ಸಂಗ್ರಹಿಸಬಹುದು. ಅಂಕಿ ಅಂಶಗಳು, ಅಭಿಪ್ರಾಯಗಳು, ಹೇಳಿಕೆಗಳು ಮುಂತಾದ ಮಾಹಿತಿಗಳೇ ಪ್ರಕಲ್ಪ ಯೋಜನೆಯ ಅಂಶಗಳು. ಸಂಚಯನದ ಮೂಲಕ ಪಡೆದ ಈ ಯೋಜನೆಯ ಅಂಶಗಳು ವಿಶ್ವಾಸಾರ್ಹ ಮತ್ತು ವಸ್ತುನಿಷ್ಠವಾಗಿರಬೇಕು.

ಉದಾ; ಕಂಪ್ಯೂಟರ್ ಲ್ಯಾಬ್ ಅನುಷ್ಠಾನಕ್ಕಾಗಿ - ದಾನಿಗಳಿಂದ ಸಹಾಯ – ಕರಪತ್ರ ಹಂಚಿಕೆ - ಸ್ಥಳೀಯ ಸಂಪನ್ಮೂಲದ ಬಳಕೆ(ಪೀಠೋಪಕರಣಗಳು) ಇತ್ಯಾದಿ.

ಇದರಿಂದ ಭಾಗಿದಾರರಿಗೆ ಉದ್ದೇಶದ ಮನವರಿಕೆಯಾಗಿ ಸಮೂದಾಯ - ಶಾಲೆಯು ತಮ್ಮ ಒಂದು ಭಾಗ ಎಂದು ಭಾವಿಸುವುದರಿಂದ ಅಂತಿಮ ಫಲಶೃತಿಯು ಧನಾತ್ಮಕವಾಗಿರುತ್ತದೆ.

೪. ಪ್ರಕಲ್ಪ ಯೋಜನೆಯ ಅನುಷ್ಠಾನ

ಪ್ರಕಲ್ಪ ಯೋಜನೆಯು ಕೇವಲ ಒಂದು ಯೋಜನೆಯಾಗಿದ್ದು ಅದರ ಅನುಷ್ಠಾವು ಪರಿಸ್ಥಿತಿಯ ಮೇಲೆ ವಿವಿಧ ಹಂತಗಳಲ್ಲಿ ಬದಲಾಗಬಹುದು. ಇದು ಸಮಗ್ರ ಯೋಜನೆಯ ಸಣ್ಣ ಸಣ್ಣ ಘಟಕಗಳ ಅನುಷ್ಠಾನದ ಮೇಲೆ ರೂಪುಗೊಂಡಿರುತ್ತದೆ.

೫. ಚಿತ್ರಾಧಾರಿತ ವರದಿ ತಯಾರಿಕೆ

ಅಧ್ಯಯನ ನಂತರ ಅಧ್ಯಯನದ ವಿವಿಧ ಹಂತಗಳು, ಅಂಶಗಳನ್ನು ವ್ಯವಸ್ಥಿತವಾಗಿ ಚಿತ್ರ ಪಠ್ಯ ಧ್ವನಿ, ವೀಡಿಯೋಗಳಲ್ಲಿ (ಇದರ ಮೂಲ ಉದ್ದೇಶ ಸಹ ಕಲಿಕೆ - ಸ್ವ ಕಲಿಕೆ) ದಾಖಲಿಸುವುದೇ ಚಿತ್ರಾಧಾರಿತ ವರದಿ ತಯಾರಿಕೆಯಾಗಿದೆ. ಚಿತ್ರಾಧಾರಿತ ವರದಿಯು ಮುಖ್ಯವಾಗಿ ಕೆಳಗಿನ ಅಂಶಗಳನ್ನು ಒಳಗೊಂಡಿರಬೇಕು.

ಮುಖಪುಟ : ಮುಖ ಪುಟವು ಶೀರ್ಷಿಕೆ, ಅಧ್ಯಯನ ಕಾರರ ಮಾರ್ಗದರ್ಶಕರ ವಿವರ ಹಾಗೂ ಪ್ರಕಲ್ಪ ನೀಡಿದ ಅಥವ ಪಡೆದ ಶಾಲೆಯ ವಿವರ, ಮತ್ತು ಪ್ರಕಲ್ಪದ ಅವಧಿಯನ್ನು ಒಳಗೊಂಡಿರುತ್ತದೆ.

ಕೃತಜ್ಞತೆ : ಉದ್ದೇಶಿತ ಅಧ್ಯಯನದ ಅವಧಿಯಲ್ಲಿ ಪಾಲ್ಗೊಂಡು ಸಹಕರಿಸಿದ ಮತ್ತು ಮಾರ್ಗದರ್ಶನ ಸಲಹೆ ನೀಡಿದವರಿಗೆ ಧನ್ಯವಾದಗಳನ್ನು ಸಮರ್ಪಿಸುವುದು ಉತ್ತಮ ಸಂಸ್ಕೃತಿ.

ಮುನ್ನುಡಿ : ಅಧ್ಯಯನದ ಹಿನ್ನಲೆ, ಉದ್ದೇಶ, ಇನ್ನಿತರ ಮಹತ್ವದ ವಿವರಗಳನ್ನು ಇಲ್ಲಿ ಹಂಚಿಕೊಳ್ಳುತ್ತಾರೆ. ಇದನ್ನು ಅಧ್ಯಯನಕಾರರ ಸಂಸ್ಥೆಯ ಮುಖ್ಯಸ್ಥರು, ವಿಷಯ ಪರಿಣತರು ಬರೆಯಬಹುದಾಗಿದೆ.

ಪರಿವಿಡಿ : ವರದಿಯ ಅಂಶಗಳನ್ನು ವ್ಯವಸ್ಥಿತವಾಗಿ ಸೂಚಿಸುವ ಸೂಚಿ. ಇದು ವಿಷಯದ ಅನುಕ್ರಮಣಿಕೆ ಮತ್ತು ಪುಟ ಸಂಖ್ಯೆಯನ್ನು ಒಳಗೊಂಡಿರುತ್ತದೆ.

ಅಧ್ಯಾಯ ೧

ಈ ಅಧ್ಯಾಯವು ಹಿನ್ನೆಲೆ ಪೀಠಿಕೆ, ಸೈದ್ಧಾಂತಿಕ ಭೂಮಿಕೆಯನ್ನು ಒಳಗೊಂಡಿರುತ್ತದೆ. ಹಿನ್ನೆಲೆಯ ಕಾರ್ಯಕ್ಕೆ ಬೇಕಾಗುವ ಪೂರ್ವಜ್ಞಾನವನ್ನು ಹೊಂದಿರುತ್ತದೆ. ಸೈದ್ದಾಂತಿಕ ಭೂಮಿಕೆಯ ಪ್ರಕಲ್ಪದ ಶೀರ್ಷಿಕೆ ಬೆನ್ನೆಲುಬು ಮತ್ತು ಸಿದ್ಧಾಂತಗಳನ್ನು ಒಳಗೊಂಡಿರುತ್ತದೆ. ಈ ಸೈದ್ದಾಂತಿಕ ಹಿನ್ನೆಲೆಗೆ ಅಧಿಕೃತ ಮೂಲಗಳು, ಕಲಿಕಾ ಆಲೋಚನೆಗಳ ಸಂಗ್ರಹಗಳ ಮತ್ತು ಅವುಗಳ ಮುಖ್ಯಾಂಶಗಳನ್ನು ಇದರಲ್ಲಿ ದಾಖಲಿಸುವುದು. ಅಲ್ಲಲ್ಲಿ ಅಗತ್ಯ ಛಾಯಾಚಿತ್ರಗಳ ನಿಯಮಿತವಾದ ಬಳಕೆ ಮಾಡಬೇಕು.

ಅಧ್ಯಾಯ ೨

ಪ್ರಸ್ತುತ ಅಧ್ಯಾಯದಲ್ಲಿ ಶೀರ್ಷಿಕೆಯ ವಿವರಣೆ, ಉದ್ದೇಶಗಳು ಸಂಚಯನ ಪ್ರಕಲ್ಪ ಯೋಜನೆ ಅನುಷ್ಠಾನಕ್ಕೆ ಬಳಸಿದ ಸಲಕರಣೆಗಳು ವಿಶ್ಲೇಷಣೆ, ಪ್ರಕಲ್ಪದ ಇತಿಮಿತಿಗಳು, ಕಂಡುಕೊಂಡ ಅಂಶಗಳು ಮತ್ತು ಫಲಶೃತಿಯನ್ನು ಒಳಗೊಂಡಿರುತ್ತದೆ.

ಸಂಚಯನವು ಉದ್ದೇಶಿತ ಅಧ್ಯಯನಕ್ಕಾಗಿ ಇಡೀ ವ್ಯವಸ್ಥೆಯನ್ನು ಪ್ರತಿನಿಧಿಸುವ ಆ ವ್ಯವಸ್ಥೆಯ ಭಾಗವನ್ನು ಸಂಚಯ ಎನ್ನುವರು. ಸಂಚನಯದಲ್ಲಿ ಗುಣ ಮಟ್ಟದ ಸಲಕರಣೆಗಳನ್ನು ಬಳಸಿ, ವಿಶ್ವಾಸರ್ಹ, ವಸ್ತುನಿಷ್ಟ ಮಾಹಿತಿ ಪಡೆದು ವಿಶ್ಲೇಷಿಸುವುದಾಗಿದೆ.

ಉದಾ; ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ಅನುಷ್ಠಾನಕ್ಕಾಗಿ ನಡೆಸಿದ ಪ್ರಕ್ರಿಯೆ, ಅನುಷ್ಠಾನ, ವಿಶ್ಲೇಷಣೆಯನ್ನು ಒಳಗೊಂಡಿರುತ್ತದೆ.

ಅಧ್ಯಾಯ ೩

ಯೋಜನೆಯ ಅನುಷ್ಠಾನದ ಅಂಶಗಳ ವಿಶ್ಲೇಷಣೆಯಿಂದ ಹೊರಹೊಮ್ಮಿದ ಅಂಶಗಳನ್ನಾಧರಿಸಿ ಅಧ್ಯಯನಕಾರರ ಸಲಹೆಗಳು, ಶಿಫಾರಸ್ಸುಗಳು, ಅನುಭವಗಳು ಮತ್ತು ಕಲಿಕೆಗಳು, ಅನುಷ್ಠಾನದ ಅಂಶಗಳನ್ನು ಒಳಗೊಂಡಿರುತ್ತದೆ.

ಅನುಬಂಧಗಳು

ಪ್ರಕಲ್ಪದ ಅವಧಿಯಲ್ಲಿ ಅಧ್ಯಯನಕ್ಕಾಗಿ ಬಳಸಿದ ಅನುಬಂಧಗಳು ಈ ಕೆಳಗಿನಂತಿರಬಹುದು.

೧. ಸಂದರ್ಶನದ ವಿವರಗಳು -

ಡಿಜಿಟಲ್ ಬಳಕೆಯ ಮೂಲಕ ಸಂದರ್ಶನದ ವಿವರವನ್ನು ದಾಖಲಿಸಿಕೊಳ್ಳಬಹುದು ಮತ್ತು ಪ್ರಕಲ್ಪ ತಯಾರಿಕೆಯಲ್ಲಿ ಸುಲಭವಾಗಿ ಬಳಸಿಕೊಳ್ಳಬಹುದು. ಉದಾ; ಮೊಬೈಲ್‌ ಲ್ಯಾಪ್‌ಟಾಪ್‌, ಧ್ವನಿ ಮುದ್ರಣ ಇತ್ಯಾದಿ ಬಳಸಿ ನಂತರ ಇತರರರಿಗೂ ಹಂಚಿಕೆ ಮಾಡಬಹುದು

೨. ಅಭಿಪ್ರಾಯ ಸಂಗ್ರಹಣಾ ಪಟ್ಟಿ -

ನಿರ್ಣಯಗಳು ವ್ಯಕ್ತಿನಿಷ್ಟವಾಗಿರದೆ ಪ್ರಜಾಪ್ರಭುತ್ವ ಮಾದರಿಯಲ್ಲಿ ಶಿಕ್ಷಕರ,ಪೋಷಕರ, ವಿದ್ಯಾರ್ಥಿಗಳ ಅಭಿಪ್ರಾಯವನ್ನು ಸಂಗ್ರಹಿಸಿ ನಂತರ ಸೂಕ್ತ ನಿರ್ಣಯ ಕೈಗೊಳ್ಳ ಬೇಕು.

೩. ಛಾಯಾ ಚಿತ್ರಗಳು -

ಪ್ರಕಲ್ಪ ತಯಾರಿಯ ಸಮಯದಲ್ಲಿ ಕೆಲವು ಉತ್ತಮ ಛಾಯಾಚಿತ್ರಗಳನ್ನು ಮೊಬೈಲ್‌ ಅಥವ ಕ್ಯಾಮರ ಬಳಸಿ ತೆಗೆದಿಟ್ಟುಕೊಳ್ಳಬೇಕು. ಇದರಿಂದ ದಸ್ತಾವೇಜೀಕರಣದಲ್ಲಿ ಪಠ್ಯದ ಜೊತೆ ಚಿತ್ರವನ್ನು ಸೇರಿಸಿ ಉತ್ತಮ ಪ್ರಸ್ತುತಿಗೆ ಸಹಕಾರಿಯಾಗುತ್ತದೆ.

೪. ಆಕರ ಗ್ರಂಥಗಳು -

  • ಈ ಯೋಜನೆಯ ಸನ್ನಿವೇಶಕ್ಕೆ ತಕ್ಕಂತೆ ಇತರೆ ಶಾಲೆಗಳಲ್ಲಿ ಬಳಸಿದ ಪ್ರಕಲ್ಪದ ಮಾದರಿಯ ಆಕರ ಗ್ರಂಥಗಳು
  • ಶೈಕ್ಷಣಿಕ ಮಾರ್ಗದರ್ಶನ ಪುಸ್ತಕಗಳು - ಸೈದ್ದಾಂತಿಕ ಪುಸ್ತಕಗಳು ಇತ್ಯಾದಿ

೫. ವರದಿ ಮಂಡನೆ

ಸೂಕ್ತ ತಂತ್ರಜ್ಞಾನ (ಉದಾ; ಪಠ್ಯ ಚಿತ್ರ ಧ್ವನಿ ) ಸಂವಹನ ಕೌಶಲ್ಯಗಳನ್ನು ಅಳವಡಿಸಿಕೊಂಡು ಅಧ್ಯಯನಕಾರರು ಪ್ರಕಲ್ಪದ ವರದಿಯನ್ನು ನಿವೇದಿಸುವುದು ಮತ್ತು ಸುಗಮಕಾರರಿಂದ ಹಿಮ್ಮಾಹಿತಿ

೬. ಪ್ರಕಲ್ಪದ ವಿಶ್ಲೇಷಣೆ : ಹಂತಗಳು

ಒಂದು ಪ್ರಕಲ್ಪವು ಪರಿಪೂರ್ಣಗೊಳ್ಳಬೇಕಾದರೆ ಅದರ ಬಗ್ಗೆ ಅದರ ಭಾಗವಾಗಿ ಭಾಗಿದಾರರು, ಬರುವ ಆಸಕ್ತರು, ಅಧ್ಯಯನ ಮಾಡುವವರು ಉಪಯೋಗ ಮಾಡಿಕೊಳ್ಳುವವರು. ಬಳಕೆ ಮಾಡುವವರು ಅಭಿಪ್ರಾಯಗಳನ್ನು ನೀಡುವುದು ಯೋಚನೆ ಮಾಡುವುದು ವಿವರಣೆ ನೀಡುವುದು, ಮುಂತಾದವುಗಳನ್ನು ಒಳಗೊಂಡಿರುತ್ತದೆ. ಇವುಗಳು ಪ್ರಕಲ್ಪದ ವಿಶ್ಲೇಷಣೆ, ವಿಮರ್ಶೆ ಮೌಲ್ಯನಿರ್ಣಯ ಎನಿಸಿಕೊಳ್ಳುತ್ತವೆ.

೭. ಪ್ರಕಲ್ಪದ ಅನುಷ್ಠಾನ

ಅಧ್ಯಯನದ ಫಲಶೃತಿಗಳನ್ನು ಕಾರ‍್ಯಕ್ಷೇತ್ರದಲ್ಲಿ ಅಳವಡಿಸಿಕೊಳ್ಳುವ ಕ್ರಮಗಳನ್ನು ಕಂಡುಕೊಳ್ಳುವುದು ಅವಶ್ಯಕತೆಗನುಗುಣವಾಗಿ ಅನುಷ್ಠಾನಗೊಳಿಸುವುದು. ಪ್ರಕಲ್ಪ ವೆಂದರೆ ಕೇವಲ ವರದಿ ತಯಾರಿಕೆಯಲ್ಲಿ ಆದ ಅನುಭವ ಘಟನೆಗಳು ವಿಷಯಗಳ ಆಧಾರದ ಮೇಲೆ ಕಾರ್ಯ ವಿಧಾನದ ಹಂತಗಳನ್ನು ವ್ಯವಸ್ಥಿತವಾಗಿ ವಸ್ತುನಿಷ್ಟವಾಗಿ ಬಿಂಬಿಸುವುದು

ಪ್ರಕಲ್ಪ ನಿರ್ವಹಿಸುವಾಗ ಬರುವ ಸಮಸ್ಯೆಗಳು

• ಸೂಕ್ತ ಮಾಹಿತಿ ದೊರಕದಿರುವುದು.

• ವಾಸ್ತವ ಸ್ಥಿತಿಗೂ ಅಧ್ಯಯನಕಾರರ ನಿರೀಕ್ಷೆಗೂ ವ್ಯತ್ಯಾಸವಿರುವುದು.

• ತಂಡದ ಸದಸ್ಯರಲ್ಲಿ ಪ್ರತಿಕ್ರಿಯಿಸುವವರಲ್ಲಿ (ವ್ಯಕ್ತ) ಸಹಕಾರದ ಕೊರತೆ.

• ಸಮಯಾಭಾವ / ಕಾರ್ಯಭಾರದ ಸಂತುಲನ.

• ತಂಡದ ಸದಸ್ಯರಲ್ಲಿ ಅವಿಶ್ವಾಸ, ನಿರ್ಲಿಪ್ತತೆ,

• ಸಾಧನಗಳ ಬಳಕೆಯಲ್ಲಿ ಗೊಂದಲ.

• ತಾಂತ್ರಿಕ ಸಮಸ್ಯೆ

• ಇಲಾಖೆಯ ಸಹಕಾರದ ಅಗತ್ಯತೆ.

ಈ ಎಲ್ಲಾ ಅಂಶಗಳ ಜೊತೆಗೆ ಅಧ್ಯಯನಕಾರರದೇ ಸ್ವ-ಸಮಸ್ಯೆಗಳಿರಬಹುದು,

ವ್ಯಕ್ತಿಗಳು ಪ್ರತಿಕ್ರಿಯಿಸುವಾಗ ಪೂರ್ಣ - ಪ್ರಮಾಣದಲ್ಲಿ, ಆಂಶಿಕವಾಗಿ ಅಥವಾ ಸಹಕಾರ ನೀಡಲು ನಿರಾಕರಿಸಬಹುದಾದ ಹಕ್ಕು ಅವರಿಗಿದೆ ಎಂಬುದನ್ನು ಅಧ್ಯಯನಕಾರರು ಗಮನಿಸಬೇಕು.

ಪ್ರಕಲ್ಪದ ವಿಶ್ಲೇಷಣೆ

ಒಂದು ಪ್ರಕಲ್ಪವು ಪರಿಪೂರ್ಣಗೊಳ್ಳಬೇಕಾದರೆ ಅದರ ಬಗ್ಗೆ ಅದರ ಭಾಗವಾಗಿ ಬರುವ ಆಸಕ್ತರು, ಅಧ್ಯಯನ ಮಾಡುವವರು ಉಪಯೋಗ ಮಾಡಿಕೊಳ್ಳುವವರು. ಬಳಕೆ ಮಾಡುವವರು ಅಭಿಪ್ರಾಯಗಳನ್ನು ನೀಡುವುದು ಯೋಚನೆ ಮಾಡುವುದು ವಿವರಣೆ ನೀಡುವುದು, ಮುಂತಾದವುಗಳನ್ನು ಒಳಗೊಂಡಿರುತ್ತದೆ. ಇವುಗಳು ಪ್ರಕಲ್ಪದ ವಿಶ್ಲೇಷಣೆ, ವಿಮರ್ಶೆ ಮೌಲ್ಯನಿರ್ಣಯ ಎನಿಸಿಕೊಳ್ಳುತ್ತವೆ.

ಮಹತ್ವ

ಒಂದು ಕೆಲಸದ ಸಮಗ್ರ ಹಿಮ್ಮಾಹಿತಿ ಸಂಗ್ರಹಣೆ ಮಾಡಲು ವಿಶ್ಲೇಷಣೆ ಅಗತ್ಯ. ಕೈಗೊಂಡ ಕಾರ್ಯದ ಓರೆ ಕೋರೆಗಳನ್ನು ಸರಿಪಡಿಸಿಕೊಳ್ಳಲು ಇದು ಸಹಾಯಕ. ಕಾರ್ಯದ ಉದ್ದೇಶಗಳು ಈಡೇರಿಕೆ ಎಷ್ಟರ ಮಟ್ಟಿಗೆ ಆಗಿದೆ ಎಂಬುದನ್ನು ತಿಳಿಯಲು ಇದು ಅತ್ಯವಶ್ಯಕ.

ಶಿಕ್ಷಣ ಕ್ಷೇತ್ರದ ಉನ್ನತೀಕರಣ, ಪ್ರಗತಿ, ವ್ಯವಸ್ಥೆಯ ಬದಲಾವಣೆಗೆ ಹಲವಾರು ಮಹತ್ವದ ಕಾರ್ಯಕ್ರಮಗಳು ಮಧ್ಯವರ್ತನೆಗಳು ಇಂದು ಅನುಷ್ಠಾನದಲ್ಲಿವೆ. ಅವುಗಳ ನಿರ್ವಹಣೆಯ ಸಂದರ್ಭದಲ್ಲಿ ಅನುಷ್ಟಾನದ ಎಲ್ಲಾ ಪ್ರಕ್ರಿಯೆಗಳು ಸಮಪರ್ಕವಾಗಿರುವುದನ್ನು ವಿಶ್ಲೇಷಣೆಯಿಂದ ಕಂಡುಕೊಳ್ಳಲು ಸಾಧ್ಯ. ವಿಶೇಷವಾಗಿ ಶಾಲಾ ಶಿಕ್ಷಣದ ಹಂತದಲ್ಲಿ ಕೈಗೊಳ್ಳುವ ಶಾಲಾ ಹಂತದ ಆಡಳಿತ ಬೋಧನೆ, ಕಲಿಕಾ ಕ್ಷೇತ್ರಗಳ ಪ್ರಕಲ್ಪಗಳು ವ್ಯವಸ್ಥೆಯ ಸುಧಾರಣೆಗೆ ಬಹಳಷ್ಟು ಪ್ರಯೋಜನವನ್ನು ಒದಗಿಸುತ್ತವೆ. ಈ ಎಲ್ಲಾ ಪ್ರಯೋಜನಗಳು ಪ್ರಕಲ್ಪವೊಂದನ್ನು ನಿರ್ದಿಷ್ಟ ಚೌಕಟ್ಟಿನೊಳಗೆ ವಿಶ್ಲೇಷಿಸಿದಾಗ ಅದರ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳು ಸಿಗುತ್ತವೆ. ಧನಾತ್ಮಕ ಸಂಗತಿಗಳು ಫಲಿತಾಂಶಗಳನ್ನು ಕಾರ್ಯ ಕ್ಷೇತ್ರದ ಸುಧಾರಣೆಗೆ ಅಳವಡಿಸಿಕೊಳ್ಳಬಹುದು.

ಪ್ರಮುಖವಾಗಿ ಪ್ರಕಲ್ಪವು ಕಲಿಕಾ ಚಟುವಟಿಕೆಯ ಒಂದು ಕಾರ್ಯ ಮತ್ತು ವಸ್ತು ನಿಷ್ಟ ಅಧ್ಯಯನವಾಗಿದೆ. ಇದನ್ನು ನಿರ್ವಹಿಸುವವರು ಮೇದಾವಿಗಳಾಗಿರುವುದು ನಿರೀಕ್ಷಿತವಾಗಿದ್ದರೂ ಅದರಲ್ಲಿ ಪರಿಣಿತರಲ್ಲದವರು ಪ್ರಕಲ್ಪ ಕೈಗೊಳ್ಳುವುದು ಮತ್ತು ಪ್ರಕಲ್ಪಗಳು ವಿಶ್ಲೇಷಣೆ ಮಾಡುವುದರ ಮೂಲ ಸ್ವತಃ ಅನ್ವೇಷಣಾ ಮನೋಭಾವ ಅಭಿಕ್ಷಮತೆಗಳನ್ನು ಆಸಕ್ತಿಗಳನ್ನು ಬೆಳೆಸಿಕೊಳ್ಳಬಹುದು.

ಅಧ್ಯಯನ ವಸ್ತುವಿನ ಆಯ್ಕೆ ಅದರ ಸೈದ್ದಾಂತಿಕ ನೆಲೆಯ ರಚನೆ ಕಾರ್ಯಯೋಜನೆ ಮತ್ತು ವಿಧಾನ ಗುಣಮಟ್ಟದ ಸಲಕರಣೆಗಳ ಸೂಕ್ತ ಬಳಕೆ, ಹಂತಗಳ ಕ್ರಮಬದ್ದ ಅಳವಡಿಕೆ ಹಾಗೂ ವರದಿ ಫಲಿತಾಂಶಗಳ ಅನುಷ್ಠಾನದ ಸಂಭಾವ್ಯತೆಗಳನ್ನು ತಿಳಿದು ಕೊಳ್ಳಲು ಪ್ರಕಲ್ಪದ ವಿಶ್ಲೇಷಣೆಯು ಮಹತ್ತರ ಸ್ಥಾನ ವಹಿಸುತ್ತದೆ.

ವಿಶ್ಲೇಷಣೆಯ ವಿಧಾನಗಳು

ಪ್ರಕಲ್ಪದ ವಿಶ್ಲೇಷಣೆಯನ್ನು ೨ ವಿಧಾನಗಳಿಂದ ಮಾಡಬಹುದು

೧. ಸ್ವ ವಿಶ್ಲೇಷಣೆ

ಪ್ರಕಲ್ಪದ ಪ್ರಯೋಗದಲ್ಲಿ ತೊಡಗಿದ ವ್ಯಕ್ತಿಯೇ ತನ್ನ ಪ್ರಕಲ್ಪದ ಕೊನೆಗೆ ಅದರ ಒಳ- ಹೊರಗನ್ನು ವಸ್ತುನಿಷ್ಠತೆಯಿಂದ ನೋಡುವುದು, ಒಂದಕ್ಕಿಂತ ಹೆಚ್ಚು ಬಾರಿ ಅಧ್ಯಯನ ಪರಿಶೀಲನೆ, ಶೀರ್ಷಿಕೆಯಿಂದ ಶೀರ್ಷಿಕೆಯ ತುಲನೆ ಇತ್ಯಾದಿಗಳ ಮೂಲಕ ಸೂಕ್ಷ್ಮ ಮೌಲ್ಯಮಾಪನ ಮಾಡುವುದು, ಸ್ವ-ವಿಶ್ಲೇಷಣೆಯಾಗುತ್ತದೆ. ಪ್ರಕಲ್ಪವನ್ನು ಪ್ರಾಯೋಗಿಕವಾಗಿ ಪ್ರಯೋಗಿಸಿದ ನಂತರ ಸ್ವ ವಿಶ್ಲೇಷಣೆ ಮಾಡಬಹುದು. ಹೀಗೆ ಮಾಡುವಾಗ ಅಧ್ಯಯನಕಾರ ತನ್ನ ಪ್ರಕಲ್ಪದ ವಿಭಿನ್ನ ಆಯಾಮಗಳನ್ನು ವಸ್ತುನಿಷ್ಠವಾಗಿ ಆಲೋಚಿಸಬೇಕಾಗುತ್ತದೆ. (ಅವಲೋಕನ ವಿಧಾನ)

೨. ಪರಸ್ಪರ ವಿಶ್ಲೇಷಣೆ

ಪ್ರಕಲ್ಪವನ್ನು ಕೈಗೊಂಡ ಇಬ್ಬರು ಪರಸ್ಪರ ವಿನಿಮಯ ಮಾಡಿಕೊಂಡು ಅಥವಾ ಗುಂಪಿನಲ್ಲಿ (ಪೋಷಕರು,ಶಿಕ್ಷಕರು) ವಿನಿಮಯ ಮಾಡಿಕೊಂಡು ಎಲ್ಲಾ ಮಾನದಂಡಗಳನ್ನು ಅನುಸರಿಸಿ ವಿಶ್ಲೇಷಣೆ ಕೈಗೊಂಡು ಪ್ರಕಲ್ಪದ ಮೌಲ್ಯವನ್ನು ನಿರ್ಣಯಿಸುವುದಾಗಿದೆ. ಈ ವಿಭಿನ್ನ ವಿಶ್ಲೇಷಣೆಯಿಂದ ಉತ್ತಮ ಹಿಮ್ಮಾಹಿತಿಯೂ ದೊರೆಯುತ್ತದೆ.

ಪ್ರಕಲ್ಪ ವಿಶ್ಲೇಷಣೆಯ ಮಾನದಂಡಗಳು

೧. ಉದ್ದೇಶಗಳ ಈಡೇರಿಕೆ

ಪ್ರತಿಯೊಂದು ಪ್ರಕಲ್ಪವು ನಿರ್ದಿಷ್ಟ ಉದ್ದೇಶಗಳನ್ನು ಹೊಂದಿರುತ್ತದೆ. ಆ ಉದ್ದೇಶಗಳ ಈಡೇರಿಕೆಗಾಗಿ ಆಯೋಜಿಸಲಾಗಿರುವ ವಿಭಿನ್ನ ಚಟುವಟಿಕೆಗಳ ಪೂರಕ ವಿಧಾನಗಳು ಸಾಂದರ್ಭಿಕ ಸಲಕರಣೆಗಳ ಬಳಕೆಯನ್ನಾಧರಿಸಿ ಪ್ರಕಲ್ಪದ ವಿಶ್ಲೇಷಣೆ ಮಾಡುವುದೇ ಮುಖ್ಯವಾಗಿದೆ. ಪ್ರಕಲ್ಪದಲ್ಲಿ ಉದ್ದೇಶಗಳು ಈಡೇರಿಕೆಯು ಎಷ್ಟರ ಮಟ್ಟಿಗೆ ಆಗಿದೆ ಎಂಬುದನ್ನು ತಿಳಿಯುವುದು ಸಹ ವಿಶ್ಲೇಷಣಾ ಅಂಶದ ಆಧ್ಯತೆಯಾಗಿದೆ.

೨. ಕಾರ್ಯವಿಧಾನದ ಸೂಕ್ತತೆ

ಪ್ರತಿಯೊಂದು ಪ್ರಕಲ್ಪದ ಉದ್ದೇಶಗಳು ಈಡೇರಿಕೆಗಾಗಿ ತನ್ನದೇ ಆದ ಕಾರ್ಯ ವಿಧಾನವನ್ನು ಅಪೇಕ್ಷಿಸುತ್ತವೆ. ಕಾರ್ಯವಿಧಾನದ ವಸ್ತುನಿಷ್ಟತೆ ಉದ್ದೇಶವನ್ನು ಯಶಸ್ವಿಯಾಗಿ ಪ್ರತಿನಿಧಿಸುತ್ತದೆ ಹಾಗೂ ಫಲಿತಾಂಶವೂ ನಿಶ್ಚಿತವಾಗಿರುತ್ತದೆ. ಅಂದರೆ ಸಂಗ್ರಹ ಸಲಕರಣೆಗಳು, ವಿಶ್ಲೇಷಣಾ ವಿಧಾನಗಳು, ಸಾಧನೆಗಳು, ಉದ್ದೇಶಗಳು ಸಮರ್ಪಕತೆಯನ್ನು ಸಾಧಿಸುವಂತಿರಬೇಕು. ಇದು ವಿಶ್ಲೇಷಣೆ ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯ.

ಉದಾ; ಶಾಲೆಯಲ್ಲಿ ಬಿಸಿ ಊಟವನ್ನು ಶಿಸ್ತಿನಿಂದ ಸೇವಿಸುವುದರ ಔಚಿತ್ಯವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರೆ ಅದನ್ನು ಮಕ್ಕಳು ಮುಂದುವರಿಸಿಕೊಂಡು ಹೋಗುವ ಸಾಧ್ಯತೆ ಇದೆ. ಅಂದರೆ

ಅಂದರೆ ಜ್ಞಾನ ಪೂರ್ವಕವಾಗಿರ ಬೇಕು. ಭಯ ಶಿಕ್ಷೆಗಳ ಮೂಲಕ ಬದಲಾವಣೆಯಾದರೆ ಅದು ತಾತ್ಕಾಲಿಕವಾಗಿದ್ದು ನಿರ್ದಿಷ್ಟ ಸಮಯದ ನಂತರ ಅದು ಸ್ವ ಸ್ಥಾನದಲ್ಲಿಯೇ ಇರುತ್ತದೆ.

೩. ವರದಿ ತಯಾರಿಕೆಯ ರೀತಿ

ಪ್ರಕಲ್ಪಕ್ಕೆ ಒಂದು ಚೌಕಟ್ಟು, ಸ್ವರೂಪ ತಂದು ಕೊಡುವುದು ವರದಿಯ ಭಾಗ. ಅದು ಪ್ರಕಲ್ಪದ ಹೊರಾವರಣವೂ ಹೌದು. ಅದರ ಮೂಲಕವೇ ಪ್ರಕಲ್ಪದ ಸಮಗ್ರತೆಯನ್ನು ತೋರ್ಪಡಿಸಬಹುದು. ವರದಿ ತಯಾರಿಕೆಯ ಪ್ರಕಲ್ಪದ ಸಿದ್ದಗೊಂಡ, ಆದರೆ ಚೆದುರಿದ ಭಾಗಗಳನ್ನು ಕ್ರಮಬದ್ಧವಾಗಿ ಹಂತಗಳಿಗೆ ಅನುಸಾರವಾಗಿ ಲಿಖಿತ ರೂಪ ಕೊಡುತ್ತದೆ. ಒಟ್ಟು ವಿಷಯಗಳನ್ನು ಅಧ್ಯಾಯಗಳ ಅಡಿಯಲ್ಲಿ ಪ್ರಧಾನ ಶೀರ್ಷಿಕೆ, ಅವುಗಳ ಉಪಶೀರ್ಷಿಕೆಗಳೆಂದರೆ

೧. ಯೋಜನೆ

೨. ಅನುಷ್ಠಾನ

೩. ವಿಶ್ಲೇಷಣೆ

ಹೀಗೆ ಪ್ರಕಲ್ಪದ ೩ ಭಾಗಗಳಲ್ಲಿನ ವಿವರಗಳನ್ನು ಸರ್ವಗ್ರತೆಯಿಂದ ಜೋಡಿಸಿ ಸಂಖ್ಯೆ ರೀತಿಯಲ್ಲಿ ಬರೆಹ, ಚಿತ್ರ , ಧ್ವನಿಯ (ವಿದ್ಯುನ್ಮಾನ) ರೂಪ ಕೊಡಬೇಕು. ವಿಶ್ಲೇಷಣೆಯು ಇದನ್ನು ಪ್ರದಾನವಾಗಿ ಪರಿಗಣಿಸಿ ಪ್ರಕಲ್ಪದ ಆಶಯವನ್ನು ಪೂರ್ಣಗೊಳಸಬಹುದು.

೪. ಪ್ರಕಲ್ಪದ ಉಪಯುಕ್ತತೆ :-

ಪ್ರಕಲ್ಪದ ಅಂತಿಮ ಗುರಿ ಫಲಾನುಭವಿಗಳಿಗೆ ಫಲಿತಾಂಶಗಳನ್ನು ತಲುಪಿಸುವುದೇ ಆಗಿದೆ. ಶಿಕ್ಷಣ ಕ್ಷೇತ್ರದಲ್ಲಿ ತೆಗೆದು ಕೊಳ್ಳುವ ಪ್ರಕಲ್ಪಗಳ ಉದ್ದೇಶಗಳು ಸಾರ್ವತ್ರಿಕವಾದವು ಆಗಿರುತ್ತವೆ. ಅದರಂತೆ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ಅದರ ಉಪಯುಕ್ತತೆಗಳು ನಿರ್ಧಾರಿತವಾಗುತ್ತದೆ.

ವಿದ್ಯಾರ್ಥಿಗಳು ಶಿಕ್ಷಕರು, ಪೋಷಕರು ಮೇಲ್ವಿಚಾರಕರು, ಸಂಘ, ಸಂಸ್ಥೆಗಳು ಹೀಗೆ ವೈಯಕ್ತಿಕವಾಗಿ ತಂಡದಲ್ಲಿ ಇಲಾಖೆಯ ದೃಷ್ಟಿಯಿಂದ ಪ್ರಕಲ್ಪದ ವಿಶ್ಲೇಷಣೆಯನ್ನು ಮಾಡಿ ಉಪಯುಕ್ತತೆಯನ್ನು ಕಂಡುಕೊಳ್ಳಬೇಕು. ಈ ಬೇರೆ ಬೇರೆ ವರ್ಗಕ್ಕೆ ಸಮುದಾಯಕ್ಕೆ ಉಪಯೋಗಗಳ ಮೂಲಕ ಫಲಿತಾಂಶಗಳ ಮೂಲಕ ಯಾವ ಸಂದೇಶವನ್ನು ರವಾನಿಸಬಹುದು ಎಂಬುದು ವಿಶ್ಲೇಷಣೆಗಳಿಂದ ತಿಳಿದು ಬರುತ್ತವೆ.

ಅತ್ಯಂತ ಮುಖ್ಯವಾದುದೆಂದರೆ ಬೋಧನಾ ಕಾರ್ಯ, ಮಕ್ಕಳ ಕಲಿಕಾ ಪ್ರಕ್ರಿಯೆ, ಸಂಪನ್ಮೂಲಗಳ ಬಳಕೆ, ಪ್ರಗತಿ ಮುಂತಾದವುಗಳ ಸುಧಾರಣೆಗೆ ಪ್ರಕಲ್ಪದಿಂದ ಬಂದಂತಹ ಫಲಿತಾಂಶಗಳು ಹೇಗೆ ಮಾರ್ಗದರ್ಶನ ನೀಡಬಲ್ಲವು ಎಂಬುದರ ಮೇಲೆ ಅದರ ಉಪಯೋಗ ವ್ಯಕ್ತವಾಗುತ್ತದೆ.

ಮೂಲ ; ಎಮ್‌ ಡಿ ಪಿ ಕಾರ್ಯಾಗಾರ. ಕರ್ನಾಟಕ ಶಿಕ್ಷಣ ಇಲಾಖೆ

ಪರಿಷ್ಕರಣೆ ; ಆನಂದ ಡಿ - ಐಟಿ ಫಾರ್ ಚೇಂಜ್

CC by SA